ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಅತ್ಯುನ್ನತ ಸಾಹಿತ್ಯ ಗೌರವವಿದು. ಭಾರತೀಯ ಭಾಷೆಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಸಾಧಕರಿಗೆ ಫೆಲೋ ಗೌರವ ಸಲ್ಲಿಸಲಾಗುತ್ತದೆ. ಹೀಗೆ ಮೊದಲ ಫೆಲೋ ಗೌರವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ ಭಾರತದ ರಾಷ್ಟ್ರಪತಿಗಳಾಗಿ ದೇಶಕ್ಕೆ ಕೊಡುಗೆ ನೀಡಿದ ಸರ್ವೇಪಲ್ಲಿ ರಾಧಾಕೃಷ್ಣನ್ ಅವರಿಗೆ 1968ರಲ್ಲಿ ಸಂದಿತು. ಇದರ ಜತೆಯಲ್ಲಿ ವಿದೇಶೀ ಲೇಖಕರಿಗೆ ಗೌರವ ಫೆಲೋಶಿಪ್, ಏಷ್ಯಾದ ಕಲೆ, ಸಾಹಿತ್ಯ, ಸಂಸ್ಕೃತಿಯ ಅಧ್ಯಯನ ಮಾಡುವವರಿಗೆ ನೀಡಲಾಗುತ್ತಿದ್ದ ಆನಂದ ಕುಮಾರಸ್ವಾಮಿ ಫೆಲೋಶಿಪ್ (ಈಗ ನಿಲ್ಲಿಸಲಾಗಿದೆ), ಸಾರ್ಕ್ ದೇಶಗಳ ಸಾಹಿತಿಗಳಿಗೆ ಸಲ್ಲುವ ಪ್ರೇಮ್‌ಚಂದ್ ಫೆಲೋಶಿಪ್ಗಳನ್ನೂ ಸಾಹಿತ್ಯ ಅಕಾಡೆಮಿ ನೀಡುತ್ತಿದೆ.